Welcome to Bengaluru

ಬೆಂಗಳೂರಲ್ಲೊಂದು ಸ್ವಾಗತ

ಇಂದು (೧೪.೧೦.೨೦೨೩) ಬೆಳಿಗ್ಗೆ ಸುಮಾರು ೧೦.೪೫ಕ್ಕೆ ಬೆಂಗಳೂರಿಗೆ ಬಂದಿಳಿದೆವು. ನಾನು, ನನ್ನ ಪತ್ನಿ ಮತ್ತು ನಮ್ಮ ಇಬ್ಬರು ಮಕ್ಕಳು. ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿರುವಾಗ ಮಂಗಳೂರು ಹಾಗೂ ಬೆಂಗಳೂರು, ಎರಡೂ ವಿಮಾನ ನಿಲ್ದಾಣಗಳಲ್ಲಿ ನನ್ನಂತಹ ಮುದುಕರಿಗೆ ನಿಲ್ದಾಣಗಳ ಸಿಬ್ಬಂದಿ ತೋರಿದ ಕಾಳಜಿಯನ್ನು ಅನುಭವಿಸಿ ಆಶ್ಚರ್ಯಚಕಿತನಾಗಿದ್ದೆ. ಅಂತಹ ಕಾಳಜಿಯ ಕಿಂಚಿತ್ ಭಾಗ ಕೂಡ ಮಂಗಳೂರು ನಗರದಲ್ಲಿ ನನಗೆ ಕಂಡುಬಂದುದಿಲ್ಲ.

ಮಂಗಳೂರಿನ ಬಸ್ಸುಗಳಲ್ಲಿ ಎರಡು ಸಾಲು ಆಸನಗಳು ಹಿರಿಯ ನಾಗರಿಕರಿಗೆ ಮೀಸಲು ಎಂಬ ನಿಯಮವೇನೋ ಇದೆ; ಆದರದು ನಿಯಮಗಳ ಪುಸ್ತಕದಲ್ಲಿ ಮಾತ್ರ. ಈ ಮೀಸಲು ಸಾಲುಗಳಲ್ಲಿ ಸಾಮಾನ್ಯವಾಗಿ ಹದಿಹರಯದ ಹುಡುಗ ಹುಡುಗಿಯರೇ ಕುಳಿತಿರುತ್ತಾರೆ. ಅವರ ಕಣ್ಣೆದುರಿಗೇ ನಾವು ಬಸ್ಸಿಗೆ ಮೇಲೇರಿ ಬಂದಿದ್ದರೂ, ಆಶಾಭರಿತ ಕಣ್ಣುಗಳಿಂದ ನೋಡುತ್ತ ಹತ್ತಿರವೇ ನಿಂತಾಗಲೂ, ಅವರ ಕಣ್ಣುಗಳು ದೂರದ ಯಾವುದೋ ದೃಶ್ಯದಲ್ಲಿ ನೆಟ್ಟಿರುತ್ತವೆ. ಅಂತಹ ಸನ್ನಿವೇಶದಲ್ಲಿ ಬಸ್ಸಿನ ನಿರ್ವಾಹಕ ಹತ್ತಿರವೇ ಇದ್ದರೂ ನಾವು ಸಮೀಪಿಸಿದೊಡನೆ ಆತನನ್ನು ಯಾವುದೋ ನಿಗೂಢ ಕರ್ತವ್ಯ ಇನ್ನೊಂದು ಮೂಲೆಗೆ ಕರೆಯುತ್ತದೆ. ಇನ್ನು ಬ್ಯಾಂಕುಗಳಲ್ಲಿ, ಹಿರಿಯರನ್ನು ಕಾಯಿಸಬಾರದು ಎಂಬ ನಿಯಮವನ್ನು ರಿಸರ್ವ್ ಬ್ಯಾಂಕು ಕಡ್ಡಾಯಗೊಳಿಸಿದ್ದರೂ ಅದರ ಪಾಲನೆ ಮಾತ್ರ ದುರ್ಬೀನಿಟ್ಟು ನೋಡಿದರೂ ಕಂಡು ಬರುವುದಿಲ್ಲ. ಇದನ್ನೆಲ್ಲ ಅನುಭವಿಸಿದ ನನಗೆ ವಿಮಾನ ನಿಲ್ದಾಣಗಳಲ್ಲಿ ಹಿರಿಯ ನಾಗರಿಕ ಪ್ರಯಾಣಿಕರನ್ನು ನಡೆಸಿಕೊಳ್ಳುವ ಮಾದರಿಯನ್ನು ಕಂಡು ಆಶ್ಚರ್ಯವಾಗಿತ್ತು. ಇದೆಲ್ಲವನ್ನು ಮೀರಿದ ಒಂದು ಆಶ್ಚರ್ಯ ನಿಲ್ದಾಣದಿಂದ ಹೊರಗೆ ಬರುವಾಗ ಕಾದಿತ್ತು.

ವಿಮಾನದಿಂದಿಳಿದು ಹೊರಗೆ ಬಂದು ಪಿಕ್‌ಅಪ್ ವಾಹನಗಳು ಬರುವ ಸ್ಥಳಕ್ಕೆ ಬಂದ ಮೇಲೆ, ಅದಾಗಲೇ ನಿಗದಿಪಡಿಸಿದ ಕಾರು ಬರಲು ಒಂದಿಷ್ಟು ಸಮಯವಿದೆ, ಕುಳಿತಿರಿ, ಕಾಫಿ ತರುತ್ತೇವೆ ಎಂದು ಮಕ್ಕಳಿಬ್ಬರೂ ಆಚೆಗೆ ತೆರಳಿದ್ದರು. ಕಾಯುವವರ ಸೌಕರ್ಯಕ್ಕಾಗಿ ಆರಾಮವಾಗಿ ಕುಳಿತಿರಲು ಆಸನಗಳಿವೆ. ಪರಿಸರವೂ ನಿರ್ಮಲವಾಗಿದೆ. ಪ್ರತಿಸಲ ಬರುವಾಗಲೂ ಬೆಂಗಳೂರಿನಲ್ಲಿ ಏನಾದರೂ ಬದಲಾಗುತ್ತಲೇ ಇವೆ. ನಾನು ಹಾಗೂ ನನ್ನ ಪತ್ನಿ ಸುತ್ತ ಮುತ್ತ ನೋಡುತ್ತ ಕುಳಿತ್ತಿದ್ದೆವು. ಇದರೆಡೆಯಲ್ಲಿ ಒಮ್ಮೆ ಎದುರಿಗೆ ದೃಷ್ಟಿ ಹಾಯಿಸಿದೆ. ಎದುರಿಗೇ ಇತ್ತು ಕಲ್ಪನೆಗೂ ಮೀರಿದ ಒಂದು ದೃಶ್ಯ.

ಈ ಬೆಂಗಳೂರಿನಲ್ಲಿ, ಇಷ್ಟೊಂದು ನಿಬಿಡ ಜನಸಂಖ್ಯೆಯಿರುವ, ಸಾವಿರಾರು ಮೋಟಾರು ವಾಹನಗಳು ಉಗುಳುವ ಹೊಗೆಯ ನಡುವೆ, ದೂರವಾಣಿ ಕಂಪೆನಿಗಳ ಮೊಬೈಲ್ ಟವರುಗಳಿಂದ ಹೊರಸೂಸುವ ವಿಷಪೂರಿತ ವಿಕಿರಣಗಳ ಹೊರತಾಗಿಯೂ, ನನಗೆ ಕಂಡ ದೃಶ್ಯ ಮಂಗಳೂರಿನಲ್ಲಿ ದಶಕಗಳಿಂದ ನನ್ನ ಕಣ್ಣಿಗೆ ಬೀಳದ ದೃಶ್ಯ, ಯಾವುದೆಂದು ಹೊಳೆಯಿತೆ? ನನ್ನೆದುರಿಗೆ, ಒಂದೆರಡು ಅಡಿಗಳಷ್ಟೇ ಅಂತರದಲ್ಲಿ ನನ್ನನ್ನೇ ದಿಟ್ಟಿಸುತ್ತ, ನಮ್ಮನ್ನು ಬೆಂಗಳೂರಿಗೆ ಸ್ವಾಗತಿಸಲೋ ಎಂಬಂತೆ ನೋಡುತ್ತ ನಿಂತಿದೆ, ಒಂದು ಗುಬ್ಬಚ್ಚಿ.

ಈ ಸ್ಮಾರ್ಟ್ ಫೋನ್ ಎಂಬ ಸಾಧನದೊಳಗೆ ಅದೆಷ್ಟೊ ಚಿತ್ರಗಳು ಬಂದು ಕುಳಿತಿವೆ. ಆದರೆ ದುರದೃಷ್ಟವೆಂದರೆ, ಆ ಕ್ಷಣದಲ್ಲಿ ನನ್ನ ಫೋನ್ ನನ್ನ ಕೈಯಲ್ಲಿರಲಿಲ್ಲ, ಅದು ಕಾಫಿ ತರಲು ಹೋದ ನನ್ನ ಮಗಳ ಕೈ ಚೀಲದಲ್ಲಿ ಕುಳಿತಿತ್ತು. ಕಾಫಿ ಕಪ್‌ಗಳನ್ನು ಹಿಡಿದುಕೊಂಡು ಮಕ್ಕಳಿಬ್ಬರೂ ಸಮೀಪಿಸುತ್ತಿದ್ದಾಗ, ಇನ್ನು ಕಾಯಲು ಸಾಧ್ಯವಿಲ್ಲ ಎಂಬಂತೆ ಗುಬ್ಬಚ್ಚಿ ಪರ‍್ರನೆ ಹಾರಿಹೋಯಿತು.

ದಿನಾಂಕ : ೧೪.೧೦.೨೦೨೩

ಮುಳಿಯ ಗೋಪಾಲಕೃಷ್ಣ ಭಟ್ಟ
ಮಂಗಳೂರು.
ಮೊ: ೯೪೪೮೧೫೨೩೪೫


Comments

Leave a comment